ಉಳಿತಾಯದ ಬಗೆಗಳು

	ಉಳಿತಾಯದಿಂದ (ನೋಡಿ- ಉಳಿತಾಯ) ಅನುಭೋಗ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುವುದರಿಂದ, ಅನುಭೋಗವನ್ನು ಕಡಿಮೆ ಮಾಡಿ ನಿಜ ಬಂಡವಾಳವನ್ನು ಹೆಚ್ಚಿಸುವ ಎಲ್ಲ ಕ್ರಮಗಳೂ ಉಳಿತಾಯವೇ. ಒಂದು ಉತ್ಪಾದನ ಸಂಸ್ಥೆಯಲ್ಲಿ ಕೈಕೊಳ್ಳುವ ಮಿತವ್ಯಯದ ಕ್ರಮಗಳಿಂದ ಉತ್ಪಾದನೆಯ ಖರ್ಚಿನಲ್ಲಿ ಸಂಭವಿಸುವ ಇಳಿತಾಯವೂ ಅಂತಿಮವಾಗಿ ಉಳಿತಾಯವೇ ಆಗುತ್ತದೆ. ಸುಲಭವಾಗಿ ಗುರುತಿಸಬಹುದಾದ ಉಳಿತಾಯದ ಬಗೆಗಳು ಇವು : 1. ವೈಯಕ್ತಿಕ ಉದ್ದೇಶಗಳಿಗಾಗಿ ವ್ಯಕ್ತಿಗಳು ಸ್ವಂತ ಇಚ್ಛೆಯಿಂದ ಮಾಡುವ ಉಳಿತಾಯ, 2. ಕಂಪನಿಗಳ ಉಳಿತಾಯ: ಗಳಿಸಿದ ಲಾಭವನ್ನೆಲ್ಲ ಷೇರುದಾರರಿಗೆ ಹಂಚದೆ ತಡೆದಿಟ್ಟು ಅದನ್ನು ಉದ್ಯಮಕ್ಕೆ ಮತ್ತೆ ಹರಿಯಿಸುವಂತೆ ಮಾಡುವುದು. ಈ ಬಗೆಯ ಉಳಿತಾಯವೂ ಆಯಾ ಕಂಪನಿಗಳ ಸ್ವಂತ ಇಚ್ಛೆಗೇ ಬಿಟ್ಟದ್ದು. 3 ಕಡ್ಡಾಯದ ಉಳಿತಾಯ: ಸರ್ಕಾರ ಉದ್ದೇಶಪೂರ್ವಕವಾಗಿ ತೆರಿಗೆಗಳನ್ನೇರಿಸಿ ಜನರ ಅನುಭೋಗವನ್ನು ಮೊಟಕು ಮಾಡಿದಾಗ ಸಂಭವಿಸುವ ಉಳಿತಾಯ (ಕಂಪಲ್ಸರಿ ಸೇವಿಂಗ್). 4. ಹಿತಮಿತವಾದ ಹಣದುಬ್ಬರ ಪರಿಸ್ಥಿತಿಯಿದ್ದು, ಬೆಲೆಗಳ ಏರಿಕೆಗೆ ಅನುಗುಣವಾಗಿ ವ್ಯಕ್ತಿಗಳ ವರಮಾನಗಳೂ ಹೆಚ್ಚದಿದ್ದ ಸಂದರ್ಭದಲ್ಲಿ ಅನುಭೋಗ ವಸ್ತುಗಳಿಗೆ ಬೇಡಿಕೆ ತಗ್ಗುವುದರಿಂದ ಸಂಭವಿಸುವ ಉಳಿತಾಯ : ಇದು ಬಲವಂತ ಉಳಿತಾಯ (ಫೋಸ್ರ್ಡ್ ಸೇವಿಂಗ್).

	ಭಾರತದಲ್ಲಿ ಸಂಸ್ಥೆಗಳ ಉಳಿತಾಯ ವ್ಯಕ್ತಿಗಳ ಉಳಿತಾಯಕ್ಕಿಂತ ಅಧಿಕವಾಗಿದೆ. ವ್ಯಕ್ತಿಗಳ ಉಳಿತಾಯವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. 1950-51ರಲ್ಲಿ ರಾಷ್ಟ್ರೀಯ ಉಳಿತಾಯ ರಾಷ್ಟ್ರೀಯ ವರಮಾನದ 51/2%ಯಷ್ಟಿದ್ದದ್ದು 1965-66ರಲ್ಲಿ 101/2%ಗೆ ಏರಿತ್ತು. ಆದರೆ 1967-68ರಲ್ಲಿ 8%ಕ್ಕೆ ಇಳಿದು 1968-69ರ ವೇಳೆಗೆ 9%ಕ್ಕೆ ಏರಿತು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇದನ್ನು 12.6%ಕ್ಕೆ ಏರಿಸಬೇಕೆಂಬುದು ಭಾರತದ ನಾಲ್ಕನೆಯ ಯೋಜನೆಯ ಗುರಿ. ಆದಾಗ್ಯೂ ಆರ್ಥಿಕ ಅಭಿವೃದ್ಧಿಯ ಯೋಜಿತ ಪ್ರಮಾಣವನ್ನು ಗಮನಿಸಿದರೆ ಇದು ಸಾಲದೆನ್ನಬಹುದು. ಉಳಿತಾಯದ ಕೊರತೆ ತುಂಬಲು ವಿದೇಶೀ ಬಂಡವಾಳ ಅಗತ್ಯವಾಗಿದೆ.					
    (ಸಿ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ